ಕರ್ಮತ್ರಯ

ಕರ್ಮವಿಚಾರವನ್ನು ಮೊದಲು ಹೇಳಹೊರಟವರು ಮೀಮಾಂಸಕರು. ಕರ್ಮ ಎಂದರೆ ಕ್ರಿಯೆ. ಅವರ ಮತದಂತೆ ಫಲಪ್ರಾಪ್ತಿಗಾಗಿ ಮಾಡುವ ಕ್ರಿಯಾಕಲಾಪವೇ ಕರ್ಮ. ಕರ್ಮಾಣಿ ಬೋಧನಾರ್ಥ ವಿದ್ಯಾ (ಶಾಬರ ಭಾಷ್ಯ)-ಎಂದರೆ ವಿದ್ಯೆ ಕರ್ಮದಲ್ಲಿ ಪರ್ಯವಸಾನಹೊಂದಬೇಕು. ಧರ್ಮ ಅನುಷ್ಠಾನವನ್ನು ಬಯಸುತ್ತದೆ. ಆದ್ದರಿಂದಲೇ ದಾರ್ಶನಿಕರು ವಿದ್ಯಾವಬೋಧಿತಧರ್ಮವಾಗಿರುವ ಸತ್ಕ್ರಿಯೆಗೆ ಮಾತ್ರ ಕರ್ಮವೆಂದರು. ಈ ಕರ್ಮ ಶಬ್ದವನ್ನು ಧರ್ಮ ಎಂಬ ಅರ್ಥದಲ್ಲಿ ಉಪಯೋಗಿಸುವುದುಂಟು. ಆದರೆ ಕರ್ಮವೇ ಧರ್ಮವಲ್ಲ. ಅದು ಧರ್ಮಗಳಲ್ಲಿ ಒಂದು.

ಅರ್ಥ ಮತ್ತು ಕಾಮ ಸಂಪಾದನಕ್ಕಾಗಿ ಮಾಡುವ ಕಾರ್ಯಕಲಾಪಗಳಲ್ಲಿ ವೇದ ಸಮ್ಮತವಾದುದೆಲ್ಲ ಕರ್ಮವೇ. ಈ ಕಾರಣದಿಂದ ಯಾಜನಾದಿಗಳು ವಿಪ್ರರಿಗೂ ಶಿಷ್ಟಪರಿಪಾಲನ, ದುಷ್ಟನಿಗ್ರಹಾದಿಗಳು ಕ್ಷತ್ರಿಯರಿಗೂ ಕೃಷಿವಾಣಿಜ್ಯಾದಿಗಳು ವೈಶ್ಯಾದಿಗಳಿಗೂ ಅರ್ಥಸಂಪಾದನೆಗಾಗಿ ವಿಹಿತವಾಗಿರುವ ಕರ್ಮಗಳು.

ಕರ್ಮವಿಭಾಗಗಳು : ಕರ್ಮ ಶ್ರೌತ ಮತ್ತು ಸ್ಮಾರ್ತ ಎಂದು ಎರಡು ವಿಧ. ಕಲ್ಪಸೂತ್ರಾದಿಗಳಲ್ಲಿ ಹೇಳುವ ಕರ್ಮಗಳು ಶ್ರೌತ ಧರ್ಮಶಾಸ್ತ್ರವೆಂದು ಪರಿಗಣಿತವಾಗಿರುವ ಆಪಸ್ತಂಭ, ಗೌತಮ ಮತ್ತು ಆಶ್ವಲಾಯನಾದಿ ಮಹರ್ಷಿ ಪ್ರಣೀತವಾದ ಸ್ಮøತಿಗಳಲ್ಲಿ ಹೇಳಿರುವ ಕರ್ಮಗಳು ಸ್ಮಾರ್ತ. ಇವುಗಳಲ್ಲಿ ವಿಹಿತಕರ್ಮ ಮತ್ತು ನಿಷಿದ್ಧಕರ್ಮ ಎಂದು ಎರಡು ಬಗೆ. ಮಾಡಬೇಕು ಎಂದು ವಿಧಿರೂಪವಾಗಿ ಶ್ರುತಿ ಸ್ಮøತಿಗಳಲ್ಲಿ ಹೇಳಿರುವುದು ವಿಹಿತಕರ್ಮ. ಸತ್ಯಂ ವದ, ಧರ್ಮಂ ಚರ-ಮುಂತಾದದ್ದು. ಮಾಡಬಾರದು ಎಂದು ಹೇಳಿರುವುದು ನಿಷಿದ್ಧ ಕರ್ಮ. ಉದಾ : ನ ಸುರಾಂಪಿಬೇತ್, ನಾನೃತಂ ವದೇತ್-ಮುಂತಾದ್ದು.

ಕರ್ಮತ್ರಯ ಸ್ವರೂಪ : ಮೀಮಾಂಸಕರು ಕರ್ಮವನ್ನು ನಿತ್ಯ, ನೈಮಿತ್ತಿಕ ಮತ್ತು ಕಾಮ್ಯ ಎಂದು ಮೂರು ಬಗೆಯಾಗಿ ವಿಂಗಡಿಸಿದ್ದಾರೆ. ಅವಶ್ಯ ಮಾಡಲೇ ಬೇಕಾದ ಕರ್ಮಗಳು. ನಿತ್ಯ. ಉದಾ : ಸಂಧ್ಯಾವಂದನ, ಶಿವಾರ್ಚನ, ಅಷ್ಟಕಾಶ್ರಾದ್ಧ, ಸಾಂವತ್ಸರಿಕ ಪಿತೃಶ್ರಾದ್ಧ, ಮುಂತಾದುವು. ಅನಿಯತವಾಗಿ ಮಾಡುವ ಕರ್ಮಗಳು ನೈಮಿತ್ತಿಕ, ಉದಾ : ಮಗ ಹುಟ್ಟಿದರೆ ಒಂದು ಇಷ್ಟಿಯನ್ನು (ಯಾಗ) ಮಾಡಬೇಕು. ನಿತ್ಯ ಮತ್ತು ನೈಮಿತ್ತಿಕ ಕರ್ಮಗಳನ್ನು ಮಾಡದಿದ್ದರೆ ಪ್ರತ್ಯವಾಯ (ಪಾಪ). ಮಾಡಿದರೆ ಕರ್ತವ್ಯವನ್ನು ಮಾಡಿದಂತಾಯಿತೆ ಹೊರತು ಅದಕ್ಕೆ ಬೇರೆ ಫಲವಿಲ್ಲ. ಯಾವುದಾದರೊಂದು ಕಾಮನೆ ಎಂದರೆ ಫಲೋದ್ದೇಶದಿಂದ ಮಾಡುವ ಕರ್ಮ ಕಾಮ್ಯ. ಉದಾ : ಪುತ್ರಕಾಮೇಷ್ಟಿ ಮುಂತಾದ್ದು. ಮಾಡಿದರೆ ಫಲವುಂಟು. ಮಾಡದಿದ್ದರೆ ದೋಷವಿಲ್ಲ. ಮತ್ತೊಂದು ವಿಶೇಷವೆಂದರೆ ನಿತ್ಯಕರ್ಮದಲ್ಲಿ ಪ್ರಧಾನ ಕರ್ಮವನ್ನು ಮಾಡಿ ಅಶಕ್ತಿಯಿಂದ ಅದರ ಅಂಗಕರ್ಮಗಳಿಗೆ ಅಕಸ್ಮಾತ್ ಲೋಪಬಂದರೂ ದೋಷವಿಲ್ಲ. ಕಾಮ್ಯ ಮಾತ್ರ ಹಾಗಲ್ಲ. ಇಲ್ಲಿ ಅದರ ಪ್ರತಿಯೊಂದು ಅಂಗವನ್ನೂ ಆಯಾ ಕಲ್ಪೋಕ್ತಕ್ರಮದಿಂದ ಮಾಡಲೇಬೇಕು. ಇಲ್ಲದಿದ್ದರೆ ಫಲ ದೊರೆಯುವುದಿಲ್ಲ.

ವೇದಾಂತದಲ್ಲಿ ಪುಣ್ಯಕರ್ಮ, ಪಾಪಕರ್ಮ ಮತ್ತು ಮಿಶ್ರಕರ್ಮ ಎಂದು ಕರ್ಮ ಮೂರು ಬಗೆಯಾಗಿದೆ. ಮನಸ್ಸು. ಮಾತು ಮತ್ತು ಮೈಗಳಿಂದ ಪರರಿಗೆ ಉಪಕಾರ ಮಾಡುವುದು ಪುಣ್ಯಕರ್ಮ. ದುಃಖವನ್ನು ಉಂಟುಮಾಡುವುದು ಪಾಪಕರ್ಮ. ಎರಡೂ ಬೆರಕೆಯಾಗಿದ್ದರೆ ಮಿಶ್ರವೆನಿಸುತ್ತದೆ. ಪರೋಪಕಾರಃ ಪುಣ್ಯಾಯ ಪಾಪಾಯ ಪರಪೀಡನಂ (ಮಹಾಭಾರತ) ಎಂಬ ಉಕ್ತಿ ಇದನ್ನು ಸಮರ್ಥಿಸುತ್ತದೆ. ಕರ್ಮಮಾಡುವಲ್ಲಿ ಅಭಿಮಾನವಿರಬಾರದು, ಗೀತೆಯ ಫಲೋದ್ದೇಶದಿಂದ ಕರ್ಮ ಮಾಡಬಾರದೆಂದಿದೆ. ಮಾಡಿದೆನೆಂಬುದು ಮನದಲ್ಲಿ ಉಳಿದರೆ ಶಿವನ ಮಾಯೆ ಏಡಿಸಿ ಕಾಡುವುದು ಎಂದು ಶರಣರು ಹೇಳಿದ್ದಾರೆ. ನಿಷ್ಕಾಮಕರ್ಮ ಎಂದರೆ ಸ್ವಾರ್ಥಕ್ಕಾಗಿ ಅಲ್ಲದೆ ಪರಹಿತಕ್ಕಾಗಿ ಅಥವಾ ಕರ್ತವ್ಯದೃಷ್ಟಿಯಿಂದ ಮಾಡುವ ಕರ್ಮ. ಆಗ ಅದು ಕರ್ಮಯೋಗ ಎನಿಸುತ್ತದೆ. ಈ ಪುಣ್ಯಪಾಪಕರ್ಮಗಳು ಮಾನವನ ಸಂಚಿತ. ಪ್ರಾರಬ್ಧ ಮತ್ತು ಆಗಾಮಿ ಕರ್ಮಗಳಿಗೆ ಮೂಲ. ಮತ್ತೊಂದು ದೃಷ್ಟಿಯಿಂದ ಸಂಚಿತ, ಪ್ರಾರಬ್ಧ, ಅತೀತ ಮತ್ತು ಆಗಾಮಿ ಎಂದು ಕರ್ಮವನ್ನು ನಾಲ್ಕು ವಿಧವಾಗಿಯೂ ವಿಭಾಗಿಸುತ್ತಾರೆ.

ಮುಂದಿನ ಜನ್ಮಕ್ಕೆ ಕಾರಣವಾದ ಸ್ವರ್ಗ ಮೊದಲಾದ ಫಲದ ಉದ್ದೇಶದಿಂದ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮಗಳು ಸಂಚಿತ. ಬಹುಪ್ರಯಾಸದಿಂದ ಎಸಗಿದ ಶ್ರವಣ, ಕೀರ್ತನ, ಮನನ, ಪೂಜಾ-ಮೊದಲಾದುವುಗಳಿಂದ ಮೋಕ್ಷಸಾಧಕವೂ ವರ್ತಮಾನ ಶರೀರಕ್ಕೆ ಕಾರಣವೂ ಆದ. ಪೂರ್ವಜನ್ಮದಲ್ಲಿನ ಸುಕೃತ ಕರ್ಮಗಳು ಪ್ರಾರಬ್ಧಕರ್ಮಗಳು. ಬ್ರಹ್ಮಸಾಕ್ಷಾತ್ಕಾರವಾಗುವುದಕ್ಕೆ ಮೊದಲು ಪೂರ್ವಜನ್ಮದಲ್ಲಿ ಅಥವಾ ಜನ್ಮಾಂತರದಲ್ಲೂ ಬ್ರಹ್ಮಸಾಕ್ಷಾತ್ಕಾರದ ಉದ್ದೇಶದಿಂದ ಮಾಡಿದ ಕರ್ಮಗಳು ಅತೀತ ಕರ್ಮಗಳು. ಬ್ರಹ್ಮಸಾಕ್ಷಾತ್ಕಾರದ ತರುವಾಯ ಈ ಜನ್ಮದಲ್ಲಿ ಮಾಡಿದ ಕರ್ಮಗಳು ಆಗಾಮಿ ಕರ್ಮಗಳು.

ಬಾದರಾಯಣರು ತಮ್ಮ ಬ್ರಹ್ಮಶಾಸ್ತ್ರದ ಕೃತಾತ್ಯಯಾಧಿಕರಣದಲ್ಲಿ ಪುಣ್ಯಪಾಪ ಕರ್ಮಗಳು ಮಾನವನ ಜನ್ಮಧಾರಣೆಗೆ ಹೇಗೆ ಕಾರಣವೆಂಬುದನ್ನು ಚರ್ಚಿಸಿದ್ದಾರೆ. ಶ್ರುತಿಯಲ್ಲಿ ಪುಣ್ಯಕರ್ಮಿಗಳು ಸ್ವರ್ಗಸುಖವನ್ನು ಅನುಭವಿಸಿ ಉಳಿದ ಸಂಚಿತ ಕರ್ಮದ ಫಲವಾಗಿ ಉತ್ತಮ ಜನ್ಮಗಳನ್ನೂ ಪಾಪಕರ್ಮಿಗಳು ನರಕವಾಸದ ತರುವಾಯ ಉಳಿದ ಸಂಚಿತಕರ್ಮದಿಂದ ನೀಚ ಜನ್ಮಗಳನ್ನೂ ಧರಿಸುವರು ಎಂದು ಹೇಳಿದೆ. ಹೀಗೆ ಭೂಲೋಕದಲ್ಲಿ ಜನಿಸಿದ ಜೀವಿಗಳು ಪ್ರಾರಬ್ಧಕರ್ಮದ ಫಲವಾಗಿ ಹೊಂದಿದ ಈ ಶರೀರದಲ್ಲಿ ಅದರ ಸುಖದುಃಖಗಳನ್ನು ಅನುಭವಿಸಿಯೇ ಕಳೆಯಬೇಕು. ಉಳಿದ ಸಂಚಿತ ಮತ್ತು ಆಗಾಮಿ ಕರ್ಮಗಳು ಬ್ರಹ್ಮಜ್ಞಾನದಿಂದ ನಾಶಹೊಂದುತ್ತವೆ.

ಬ್ರಹ್ಮಜ್ಞಾನವಾದೊಡನೆಯೇ ಅದರ ಮಹಿಮೆಯಿಂದ ಮುಂದೆ ಬರುವ ಆಗಾಮಿ ಪಾಪಗಳು ಅವನನ್ನು ಮುಟ್ಟುವುದಿಲ್ಲ. ಹಿಂದೆ ಮಾಡಿದ ಸಂಚಿತ ಕರ್ಮ ನಾಶವಾಗುತ್ತದೆ. ಶ್ರುತಿ, ಸ್ಮøತಿ ವಾಕ್ಯಗಳು ಈ ವಿಷಯವನ್ನು ಸಮರ್ಥಿಸುತ್ತವೆ. ಕೆಲವರು ಪ್ರಾರಬ್ಧಕರ್ಮವೂ ತತ್ತ್ವ (ಬ್ರಹ್ಮ)ಜ್ಞಾನದಿಂದ ನಷ್ಟವಾಗುತ್ತದೆ. ಅದೇ ಬ್ರಹ್ಮಜ್ಞಾನದ ಹಿರಿಮೆ-ಎಂದು ಹೇಳುತ್ತಾರೆ. 

(ನೋಡಿ- ಕರ್ಮ)          

(ಎಂ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ